Saturday, March 19, 2022

ಸತ್ಯವೆಲ್ಲಿ

ಸತ್ಯವೆಲ್ಲಿ ಸತ್ಯವೆಲ್ಲಿ 
ಎಂದು ಬಲು ಹುಡುಕಾಡಿದೆ ಅಲ್ಲಿ ಇಲ್ಲಿ 
ಓದಿದೆ ಸಿಕ್ಕ ಸಿಕ್ಕ ಪುಸ್ತಕಗಳಲ್ಲಿ 
ಕೇಳಿದೆ ಎಲ್ಲ ಹೇಳುವವರಲ್ಲಿ 
ಏಕಾಗ್ರತೆಯಿಂದ ಕುಳಿತೆ ಧ್ಯಾನದಲ್ಲಿ 
ಆದರೂ ಸತ್ಯದ ಗುರುತಿಲ್ಲ ಪತ್ತೆ ಇಲ್ಲ 
ಅನಿಸಿತು ಸತ್ಯವಿಲ್ಲ ಈ ಜಗದಲ್ಲಿ 
ಸತ್ಯ ಸತ್ತಿದೆ ಸತ್ಯಕ್ಕೆ ಸಾವಿಲ್ಲ 
ಎಂದು ಕೂಗಿದಂತೆ ಕೇಳಿತು ಆಕಾಶದಲ್ಲಿ 
ಓಡಿದೆ ಜೀವದ ಹಂಗು ತೊರೆದು ಸ್ಮಶಾನದಲ್ಲಿ 
ಪ್ರಖರವಾಗಿ ನಿಖರವಾಗಿ ಸತ್ಯದ ದರ್ಶನವಾಯಿತಲ್ಲಿ 
 - ಬುಡ ಬುಡ್ಕಿ ಬಾಬಾ

Saturday, August 21, 2021

ಹುಡುಕ್ಕುತ್ತಿರುವೆ

ಹುಡುಕುತ್ತಿರುವೆ ಆ ಚಿತ್ರಕ್ಕಾಗಿ ಹುಡುಕುತ್ತಿರುವೆ ಆ ಕ್ಷಣಕ್ಕಾಗಿ ಹುಡುಕುತ್ತಿರುವೆ ಆ ಸ್ಥಳಕ್ಕಾಗಿ ಹುಡುಕ್ಕುತ್ತಿರುವೆ ಆ ಶಿಲ್ಪಕ್ಕಾಗಿ ಹುಡುಕ್ಕುತ್ತಿರುವೆ ಆ ಶಬ್ದಕ್ಕಾಗಿ ಹುಡುಕ್ಕುತ್ತಿರುವೆ ಆ ಒಳನೋಟಕ್ಕಾಗಿ ಹುಡುಕ್ಕುತ್ತಿರುವೆ ಆ ಸಂಗೀತಕ್ಕಾಗಿ ಹುಡುಕ್ಕುತ್ತಿರುವೆ ಆ ದೃಶ್ಯಕ್ಕಾಗಿ ಹುಡುಕ್ಕುತ್ತಿರುವೆ ಆ ಅನುಭವಕ್ಕಾಗಿ ಹುಡುಕ್ಕುತ್ತಿರುವೆ ಮನದಾಳದ ಆ ಅಮೂರ್ತ ಭಾವನೆಯ ಬಿಡುಗಡೆಗೆ ರೂಪಕವಾಗಿ ಕಾಲ ಕಳೆಯುತ್ತಲಿದೆ ಜೀವನದ ಪಯಣ ಕೊನೆಯತ್ತ ಸಾಗಿದೆ ಸಿಕ್ಕಿಲ್ಲ ಇನ್ನೂ ಏನು ಭರವಸೆ ಒಂದೇ ಆ ರೂಪಕ ಬಂದು ಹೋಗುವುದು ಪ್ರತಿ ಬಾರಿ ದಟ್ಟ ಕತ್ತಲು ಕವಿದಾಗ ಕಂಡು ಕಾಣದ ಮಾಯವಾಗುವ ಮಿಂಚಿನಂತೇ - ಬುಡ ಬುಡ್ಕಿ ಬಾಬಾ

Monday, July 20, 2020

ಕುತೂಹಲ

ಗೊತ್ತಿರಲಿಲ್ಲ ಆಳ ಗೊತ್ತಿರಲಿಲ್ಲ ಪಯಣ
ಹಿಂತಿರುಗಿ ನೋಡಿದರೆ ಕಾಣಲಿಲ್ಲ ನಡೆದು ಬಂದ ದಾರಿ
ಕಂಡ ಆಯ್ಕೆ ಒಂದೇ ಒಂದು
ಮುನ್ನುಗ್ಗಿ ಧುಮುಕುವುದು
ಆದರೂ ಇತ್ತು ಅದೆಂತದೋ ಉತ್ಸಾಹ
ಅರಿಯದ ಕಾಣದ ಲೋಕದ ಕುತೂಹಲ
ಕುತೂಹಲದ ಎಳೆ ಹಿಡಿದೆ ಧುಮುಕಿದ್ದೇ ಆ ಪ್ರಪಾತಕ್ಕೆ
ಬೆವೆರಿದ್ದ ದೇಹಕ್ಕೆ ದಣಿದಿದ್ದ ಮನಕ್ಕೆ
ಆ ತಂಗಾಳಿ ಮುದವೆನಿಸಿದ್ದೆನೋ ನಿಜ
ಪ್ರತಿ ನಿಮಿಷ ಹೊಸ ದೃಶ್ಯ ಮಾಯಾ ಲೋಕ
ಬೀಳುತಿದ್ದೆನೋ ಮೇಲೇರುತ್ತಿದ್ದೆನೋ ಒಂದು ಅರಿವಿಲ್ಲ
ಅತ್ತ ಇತ್ತ ಕೈ ಕಾಲು ಬಡೆದ್ದದೊಂದ್ದೆ ಬಂತು
ಸಿಗಲಿಲ್ಲ ಏನೂ ಕೈಯಲ್ಲಿ
ವೇಗ ಹೆಚ್ಚುತ್ತಲಿತ್ತು ಕಾಲ ಕಳೆಯುತ್ತಲಿತ್ತು
ಆಧಾರವೊಂದು ಸಿಕ್ಕಿತು ಸಿಕ್ಕಿತು ಅನಿಸುತ್ತಲೇ
ಮತ್ತೆ ಕೈ ಕಳಚಿ ಎಲ್ಲ ಬರಿದಾಗುತಿತ್ತು 
ಗಾಢ ಕತ್ತಲೆ ಆಗಾಗ ಮಿಣುಕು ದೀಪಗಳ ಬೆಳಕು
ಕಣ್ಣಿಗೇನೋ ಕಂಡಂತಾಗುವ ಮೊದಲೇ ಮತ್ತದೇ ಕತ್ತಲು
ಒಂಟಿ ಪಯಣ ಮೈಲಿಗಲ್ಲುಗಳಿಲ್ಲ ಸಂಕೇತಗಳಿಲ್ಲ
ಅರೆ ಗಳಿಗೆ ಕೂಡ ವಿಶ್ರಮಿಸಲು ತಂಗುದಾಣಗಳಿಲ್ಲ
ಸ್ವಾತಂತ್ರವೋ ಅಥವಾ ಸ್ವಾತಂತ್ರದ ಭ್ರಮೆಯೋ
ನಿಜವೋ ಸುಳ್ಳೋ ಸರಿಯೋ ತಪ್ಪೋ
ಸೋಲೋ ಗೆಲುವೂ ಏನದು ಒಂದು ತಿಳಿಯದಾಗಿತ್ತು
ಅದೆಂತದೋ ತರ್ಕದ ಸೀಮೆಗಳ ದಾಟಿದ
ಹುಚ್ಚು ಭರವಸೆಯ ಕುದುರೆಯ ಮೇಲೆ ಕುತಂತಿತ್ತು
ಕುದುರೆ ಓಡುತಿತ್ತು ಕಡಿವಾಣ ಕಡೆದಿತ್ತು
ಭಯದ ಭಯವಿಲ್ಲದಂತಾಗಿದ್ದಕ್ಕೆ ಭಯವಾಗಿತ್ತು
ಆಗಾಗ ಮನ ಮತ್ತದೇ ಹಳೇ ಹಾದಿಗಳ ಜಾಡು ಹುಡುಕುತಿತ್ತು
ಎಲ್ಲ ಮುಗಿಯಿತು ಅನಿಸಿದಾಗ
ಮತ್ಯಾವುದೋ ಹೊಸ ಕರೆ ಬರುತಿತ್ತು ವಿಶ್ವಾಸ ತುಂಬುತಿತ್ತು
ಮತ್ತದೇ ಆಸೆ ನಿರಾಸೆಗಳ ನಡುವಿನ ಓಲಾಟ
ಗಡಿಯಾರದ ಲಂಬಕದಂತೆ ನಿರಂತರವಾಗಿ ಸಾಗಿತ್ತು

Sunday, April 19, 2020

ಆ ಕನಸು..

ಆ ಕನಸು ನನ್ನೊಟ್ಟಿಗೆ
ಒಡ ಹುಟ್ಟಿದವನಂತಿತ್ತು
ಆದ ಸಾಕಾರ ಮಾಡಲು
ಕಂಕಣ ಕಟ್ಟಿಯಾಗಿತ್ತು
ಪ್ರತಿ ದಿನ ಆ ಕನಸಿಗೆ
ಹೊಸ ರೆಕ್ಕೆ ಮೂಡುತಿತ್ತು
ಅದು ಗರಿಗೆದರಿ ಮೈ ಮರೆತು
ಎಲ್ಲೆಲ್ಲೋ ಹಾರುತಿತ್ತು
ಆದ ಹಿಡಿಯಲು ಸುತ್ತಿ ಸುತ್ತಿ
ನನ್ನ ತಲೆ ತಿರುಗುತಿತ್ತು
ಕಣ್ಣಿಗೆ ಕತ್ತಲು ಕವಿಯುತಿತ್ತು
ಸುಸ್ತಾಗಿ ಅರೆ ಘಳಿಗೆ
ಕಣ್ಣು ಮುಚ್ಚಿದರೆ ಸಾಕು
ಮತ್ತದೇ ಕನಸು
ಬಂದು ಕಾಡುತಿತ್ತು

Thursday, March 7, 2019

ಸರಪಳಿಗಳು

ನಮ್ಮ  ಹುಟ್ಟು ಇಲ್ಲ
ನಮ್ಮ ಕೈಯ್ಯಲ್ಲಿ
ತಂದೆ ತಾಯಿ ಮನೆತನವೆಂಬ
ಸರಪಳಿಗಳು ಬಿಗಿದವು
ಕಣ್ಣು ತೆರೆದು ನೋಡುತ್ತಲೇ

ದೊರೆತ ದೇಹದ ಆಯ್ಕೆಯಿಲ್ಲ
ನಮ್ಮ ಕೈಯ್ಯಲ್ಲಿ
ದೈಹಿಕ ನ್ಯೋನತೆಗಳೆಂಬ
ಸರಪಳಿಗಳು ಬಿಗಿದವು
ಮೊದಲ ಹೆಜ್ಜೆ ಇಡುತ್ತಲೇ

ನಾವುಂಡ ಊಟ ಇರಲಿಲ್ಲ
ನಮ್ಮ ಕೈಯಲ್ಲಿ
ಆಹಾರದ ದೋಷಗಳ
ಸರಪಳಿಗಳು ಬಿಗಿದವು
ಮೊದಲ ತುತ್ತು ತಿನ್ನುತ್ತಲೇ

ನಾವು ಬೆಳೆದ ವಾತಾವರಣ
ಇರಲಿಲ್ಲ
ನಮ್ಮ ಕೈಯಲ್ಲಿ
ಮಾನಸಿಕ ದೋಷಗಳ
ಸರಪಳಿಗಳು ಬಿಗಿದವು
ಮೊದಲ ಆಟ ಆಡುತ್ತಲೇ

ಕಲಿತ ಶಾಲೆ ಓದಿದ ಪುಸ್ತಕಗಳು
ಇರಲಿಲ್ಲ
ನಮ್ಮ ಕೈಯಲ್ಲಿ
ಅಜ್ಞಾನದ
ಸರಪಳಿಗಳು ಬಿಗಿದವು
ಮೊದಲ ಪಾಠ ಕಲಿಯುತ್ತಲೇ

ಸಿಕ್ಕ ಮೊದಲ ಕೆಲಸ
ಆದ ಮದುವೆ
ಇರಲಿಲ್ಲ ಹೆಚ್ಚಿನ ಆಯ್ಕೆ
ನಮ್ಮ ಕೈಯಲ್ಲಿ
ಸಂಸಾರದ
ಸರಪಳಿಗಳು ಬಿಗಿದವು
ಸ್ವಾತಂತ್ರದ ಕಿಟಕಿ ತೆರೆಯುತ್ತಲೇ

ಮಾಡ ಬೇಕಾದ ಕೆಲಸ
ಕೆಲಸದ ರೀತಿ ಸಮಯ
ಇರಲಿಲ್ಲ ಆಯ್ಕೆ
ನಮ್ಮ ಕೈಯಲ್ಲಿ
ಸಂಬಳದ
ಸರಪಳಿಗಳು ಬಿಗಿದವು
ಸಾಲದ ಖಾತೆ ತೆರೆಯುತ್ತಲೇ

ನಾಲ್ಕು ದಶಕಗಳೇ
ಕಳೆದವು ಈ ಸರಪಳಿಗಳ
ಬಂಧನದಲಿ
ಆದರಿನ್ನೂ ಹಾಗಲ್ಲ
ಕಳಚಿದೆ ಒಂದೊಂದೇ ಸರಪಳಿ
ಉಸಿರಾಡಬೇಕಿದೆ
ನಡೆಯಬೇಕಿದೆ ಓಡಬೇಕಿದೆ
ಎಲ್ಲಕಿಂತ ಹೆಚ್ಚಾಗಿ
ಮುಕ್ತವಾಗಿ ಬದುಕಬೇಕಿದೆ


Tuesday, January 15, 2019

ಈ ಯುದ್ಧ

ಈ ಯುದ್ಧವಲ್ಲ ಕೇವಲ ಗಂಟೆ ದಿನಗಳದು
ಸಾಲದು ತೋರಿದರೆ ಶೌರ್ಯ
ಆಗೊಮ್ಮೆ ಈಗೊಮ್ಮೆ
ಇಲ್ಲಿ ನಿರ್ಣಾಯಕವಲ್ಲ ಗೆಲುವು ಸೋಲುಗಳು
ಕ್ಷಣಿಕ ಅವೆಲ್ಲ
ನಿರಂತರ ಸತ್ಯ ಒಂದೇ
ಇದೊಂದು ವಿರಾಮ ಕೊನೆಯಿರದ ಯುದ್ಧ || ೧ ||

ಶತ್ರುಗಳು ಯಾರೆಂದು ತಿಳಿಯದು ಇಲ್ಲಿ
ಇಲ್ಲಿ ಯಾರೂ ಸದಾ ಶತ್ರುಗಳಲ್ಲ
ಇಲ್ಲಿ ಯಾರೂ ಸದಾ ಮಿತ್ರರಲ್ಲ
ಮಿತ್ರರಲ್ಲಿ ಶತ್ರುಗಳು
ಶತ್ರುಗಳಲ್ಲಿ ಮಿತ್ರರು ಅಡಗಿಹರು
ಅದ ಕಾಣಲು ಸದಾ ತೆರೆದಿರಬೇಕು ಅರಿವಿನ ಒಳಗಣ್ಣು
ಸದಾ ಮಸೆಯುತಿದ್ದರೂ ಮನದ ಕತ್ತಿ
ಯುದ್ಧದ ಏಕತಾನತೆಗೆ
ಕಳೆದು ಹೋಗುವುದು ಮನದ ಹರಿತ
ಉಡುಗಿ ಹೋಗುವುದು ಕೈ ಕಾಲಿನ ಬಲ || ೨ ||

ಈ ಕ್ಷಣಕ್ಕಾಗೇ ಕಾದವರಂತೆ ಎರಗುವರು
ಕಾಣದ ಶತ್ರು ಸೈನ್ಯದ ಆಕ್ರಮಣಕಾರರು
ಪ್ರತಿ ಆಕ್ರಮಣಕ್ಕೂ ಕೊಡಲಾಗದು
ಪ್ರತೀಕಾರದ ಉತ್ತರ
ತಿಳಿದು ಅರಿತು ಆಯ್ಕೆ ಮಾಡಬೇಕಿದೆ
ಕಾದಡಾಲೇ ಬೇಕಾದ ಯುದ್ಧಗಳ
ಕೆಲವೊಮ್ಮೆ ಓಡಿ ಹೋಗಿ ಅವಿತು
ಕೆಲವೊಮ್ಮೆ ಗೆದ್ದು ಸೋತು
ಕೆಲವೊಮ್ಮೆ ಸೋತು ಗೆದ್ದು
ಎಲ್ಲ ಕಳೆದುಕೊಂಡರೂ ಸೈ
ಎದುರಿಸಬೇಕಿದೆ ಕಳೆದುಕೊಳ್ಳದೆ
ಮನದ ಸ್ಥಿಮಿತ ಸ್ಥೈರ್ಯ ಭರವಸೆ  || ೩ ||

ಮತ್ತೆ ಮತ್ತೆ ಕಾದಾಡಿ
ಮನದಟ್ಟು ಮಾಡಿಕೊಳ್ಳಬೇಕಿದೆ
ಈ ಯುದ್ಧವಲ್ಲ ಗಂಟೆ ದಿನಗಳದು
ಈ ಯುದ್ದಕ್ಕಿಲ್ಲ ಸೋಲು ಗೆಲುವಿನ ಪರಿಣಾಮ
ಈ ಯುದ್ಧ ಬಿಡುವುದೇ ಸೋಲು
ಈ ಯುದ್ಧವಾಡುತ್ತಿರುವುದೇ ಗೆಲುವು  ಎಂದು|| ೪ ||
 ಬುಡ ಬುಡ್ಕಿ ಬಾಬಾ

Tuesday, August 28, 2018

ಅಭಿಮನ್ಯು

ಚಕ್ರವ್ಯೂಹದ
ಒಳಗೆ
ಹೋಗುವುದು
ಮಾತ್ರ ಗೊತ್ತಿತ್ತು
ಹೊರ ಬರುವುದು
ಗೊತ್ತಿರಲಿಲ್ಲ
ಆ ಹಸುಳೆ
ಅಭಿಮನ್ಯುವಿಗೆ
ಆದರೇನು? || ೧ ||

ಕೈ ಕಟ್ಟಿ
ಕೂಡಲಿಲ್ಲ
ಹಿಂಜರಿಯಲಿಲ್ಲ
ಮುನ್ನುಗ್ಗಿ
ಭೇದಿಸಿದ ಆ
ಚಕ್ರವ್ಯೂಹವನ್ನು
ಗರ್ಜಿಸಿ
ಆತ ಕಾದಾಡಿದ
ಕ್ಷಣಗಳು  ಅಲ್ಪ
ಆದರೇನು? || ೨ ||

ಘಟಾನುಘಟಿಗಳ
ಜಂಘಾ ಬಲ
ಉಡಗಿಸಿದ
ಅವರ ಧರ್ಮದ
ಮುಖವಾಡ
ಕಳಚಿದ
ಹೌದು ಹೂರ
ಬರಲಿಲ್ಲಆತ
ಆದರೇನು? || ೩ ||

ಇತಿಹಾಸದ
ಪುಟದಲ್ಲಿ
ಅನೇಕರ
ಮನಪಟಲದಲ್ಲಿ
ದಾಖಲಾದ
ಸ್ಪೂರ್ತಿಯ
ನಿರಂತರ
ಚಿಲುಮೆಯಾಗಿ || ೪ ||

 ಬುಡ ಬುಡ್ಕಿ ಬಾಬಾ

Monday, August 27, 2018

ಋಣಾನುಬಂಧ

ಸಂಬಂಧಗಳು
ಋಣಾನುಬಂಧಗಳೆಂಬ
ಕೊಂಡಿಯಿಂದ
ಬೆಸೆದವು || ೧ ||

ಕೆಲವು ನಾವೆಂದೋ
ಕೊಟ್ಟ  ಸಾಲ
ಮರಳಿ ಪಡೆಯುವ
ನಿಮಿತ್ತದಿಂದಾದರೆ
ಇನ್ನುಳಿದವು
ನಾವೆಂದೋ
ಇಸಿದುಕೊಂಡ
ಸಾಲ  ಬಡ್ಡಿ ಸಹಿತ
ಮರಳಿ ಕೊಡಲು || ೨ ||

ಸೇವೆ ಪ್ರತೀಕಾರಗಳ
ಬಾಬ್ತಿನಲ್ಲಿ
ಲೆಕ್ಕ ಚುಕ್ಕ್ತಾ
ಆಗದ ಹೊರತು
ತೀರದು ಈ
ಋಣಾನುಬಂಧ  || ೩ ||
 ಬುಡ ಬುಡ್ಕಿ ಬಾಬಾ

Thursday, August 16, 2018

ಮದುವೆ

ಶುದ್ಧ ಸುಳ್ಳು 
ಮದುವೆಗಳು ಆಗಿಲ್ಲ ಸ್ವರ್ಗದಲ್ಲಿ
ಯಾರು ಹುಟ್ಟಿಲ್ಲ  ಒಬ್ಬರಿಗಾಗಿ ಇನ್ನೊಬ್ಬರಾಗಿ || ೧ ||

ಅದೆಲ್ಲೋ ಹುಟ್ಟಿ
ಅದ್ಯಾವುದೋ ಮನೆಯಲ್ಲೀ ಬೆಳೆದು
ಅದ್ಯಾವುದೋ ಕನಸಿನ ಬಾನಲ್ಲಿ ಹಾರುತಿರುವ
ಗಂಡು ಹೆಣ್ಣೆಂಬ ಹಕ್ಕಿಗಳು
ಮದುವೆಯೆಂಬ ಜಾರು ಬಂಡೆಯಲ್ಲಿ
ಜಾರಿ  ಜೋಡಿಯಾದ  ಮಾತ್ರಕ್ಕೆ
ಅದ್ಹೇಗೆ ಆಗಲು ಸಾಧ್ಯ ಒಬ್ಬರಿಗಾಗೇ ಇನ್ನೊಬ್ಬರು || ೨ ||

ಮದುವೆ ಒಂದು ಆರಂಭವಷ್ಟೇ
ಬಲು ದೂರದ ಜೀವನ ಪಯಣಕೆ
ಈ ಪಯಣ ಅಲ್ಲ ಸರಳ ನೇರ ದಾರಿ
ಅಂಕು ಡೊಂಕುಗಳುಂಟು
ಕಡಿದಾದ ತಿರುವುಗಳುಂಟು
ಏರು ಬೀಳುಗಳುಂಟು
ದಾರಿ ತಪ್ಪಿದರೆ ಭಾರೀ ಜುಲ್ಮಾನೆಗಳುಂಟು
ಸರಿ ದಾರಿ ನಡೆದಾಗ
ಅಲ್ಲಲ್ಲಿ ಖುಷಿಯ ಓಯಸೀಸುಗಳೂ ಉಂಟು || ೩ ||

ಈ ಪಯಣದ ಮಜ ಬೇಕಿದ್ದರೆ ಮೊದಲು
ಒಬ್ಬರನೊಬ್ಬರು ಸಹಿಸಬೇಕಿದೆ
ಸಹಿಸಿ ಇತಿಮಿತಿಗಳ ಅರಿಯಬೇಕಿದೆ
ಅವನೇ ನನಗಾಗಿ ಬದಲಾಗಲಿ
ಅವಳೇ ನನಗೆ ಹೊಂದಿಕೊಳ್ಳಲಿ
ಎಂಬ ಅಹಂಕಾರ ತೊರೆಯಬೇಕಿದೆ
ನಮ್ಮ ಬೆನ್ನು ಆಗಾಗ ನಾವೇ ನೋಡಬೇಕಿದೆ
ಅವಳ ನ್ಯೂನತೆಗೆ ಇವನ ಬಲ
ಇವನ ದೌರ್ಬಲ್ಯಕ್ಕೆ ಅವಳ ತ್ರಾಣ ತುಂಬಬೇಕಿದೆ
ಇಬ್ಬರ ದಾರಿ ಬೇರೆ ಬೇರೆಯಾದರೂ
ಗುರಿ ಒಂದೇ ಎಂದು ಅರಿಯಬೇಕಿದೆ || ೪ ||

ಒಬ್ಬರು ಹತ್ತಲು ಇನ್ನೊಬ್ಬರು ಹೆಗಲು ಕೊಡಬೇಕಿದೆ
ಹೆಗಲು ಕೊಟ್ಟವರ ಕೈ ಹಿಡಿದು ಮೇಲೆ ಎಳೆಯಬೇಕಿದೆ
ಸೋತಾಗ ಹಿಂದೆ ನಿಂತು ಆಸರೆಯಾಗಬೇಕಿದೆ
ಗೆದ್ದಾಗ ಖುಷಿ ಪಟ್ಟು ಅದನು ಇಮ್ಮಡಿ ಮಾಡಬೇಕಿದೆ
ಹೆಜ್ಜೆಗೆ ಹೆಜ್ಜೆ ಹಾಕಿ ನಡೆದಂತೆಲ್ಲ
ಹೆಚ್ಚೆಚ್ಚು ಒಬ್ಬರನೊಬ್ಬರು ಅರಿಯಬೇಕಿದೆ
ಅವರಿದ್ದ ಹಾಗೆ ಅವರ ಒಪ್ಪಬೇಕಿದೆ
ಒಂದಕ್ಕೆ ಒಂದು ಸೇರಿದರೂ ಕೂಡ
ಬಾಳಿನ ಒಟ್ಟು ಮೌಲ್ಯ 
ಎರಡಕ್ಕಿಂತ ಹೆಚ್ಚಾಗುವಂತೆ ಬಾಳಬೇಕಿದೆ || ೫||

ಇದನರಿತು ಬಾಳ ಸಂಘರ್ಷ
ಜೊತೆಗೂಡಿ  ಎದುರಿಸಿದ್ದೇ ಆದರೆ
ಮದುವೆಗೊಂದು ಸಾರ್ಥಕ್ಯವಿದೆ
ದೇವತೆಗಳೇ ಕಾದಾರು ನಿಮಗಾಗಿ
ಸ್ವರ್ಗದ ಬಾಗಿಲಲಿ ಹೂ ಹಿಡಿದು
ನೀವಲ್ಲಿ ತಲುಪಿದಾಗ ಅಂದಾರು
ಈ ಮದುವೆ ಆದದ್ದು ಸ್ವರ್ಗದಲ್ಲಲ್ಲ
ಈ ಮದುವೆ ಆದದ್ದು ಭುವಿಯಲ್ಲೇ ಸ್ವರ್ಗ ಸೃಸ್ಟಿಸಲು
ಇವರಿಬ್ಬರೂ ಹುಟ್ಟಿದ್ದು ಒಬ್ಬರಿಗಾಗಿ ಇನ್ನೊಬ್ಬರಲ್ಲ
ಇವರಿಬ್ಬರೂ ಬಾಳಿದ್ದು ಒಬ್ಬರಿಗಾಗಿ ಇನ್ನೊಬ್ಬರಂತೆ
ಅದಕಾಗೆ ಇವರಿಗಿಲ್ಲಿ ಸ್ವಾಗತ ಸುಸ್ವಾಗತ || ೬ ||

 ಬುಡ ಬುಡ್ಕಿ ಬಾಬಾ

Thursday, August 2, 2018

ನಮ್ಮತನ

ನಾನು ಅವನಂತಾಗಬೇಕು
ನಾನು ಇವನಂತಾದರೆ ಇನ್ನೂ ಚೆನ್ನ
ಅದ್ಯಾರೋ ಹೇಳಿದ ಮಾತು ಕೇಳೋಣ
ಆ ಒಳ್ಳೆ ಗುಣ ಕಲಿಯೋಣ
ಈ ದಿನಚರಿ ರೂಡಿಸಿಕೊಳ್ಳೋಣ
ಒಟ್ಟು ನಮ್ಮಲ್ಲಿ ಇದ್ದದ್ದನ್ನು ಬಿಟ್ಟು
ಬೇರೆಲ್ಲ ಬಯಸೋಣ
ಅದಾಗದಿದ್ದಾಗ ನಮ್ಮನ್ನೇ ನಾವು
ದೂರಿಕೊಳ್ಳೋಣ ಮಾತು ಮಾತಿಗೂ
ಹೀಯಾಳಿಸಿ ಗೇಲಿ ಮಾಡೋಣ
ಗೊಣಗಿ ಗೊಣಗಿ ಅವಮಾನಿಸೋಣ
ಅಷ್ಟು ಸಾಕಾಗದಿದ್ದರೆ ಮನಸಲ್ಲೇ
ನಮ್ಮ ವ್ಯಕ್ತಿತ್ವದ ಕೊಲೆ ನಾವೇ ಮಾಡೋಣ
ಯಾರಿಗೂ ಸಂಶಯ ಬಾರದಂತೆ
ಮನದ ಯಾವುದೋ ಮೂಲೆಯಲಿ
ನಮ್ಮತನದ ಶವ ಹೂಳೋಣ
ನೆನಪಾದಗೊಮ್ಮೆ ಅದರ ಮೇಲೆ
ಒಂದೆರಡುಬಾಡಿದ ಹೂವು ಬಿಸಾಕೋಣ
ಬಿಕ್ಕಿ ಬಿಕ್ಕಿ ಅತ್ತು ಹಗುರಾಗೋಣ
ಮರು ಕ್ಷಣ ಮತ್ತೆ ಹೊಸ ನಕಲು
ಮಾಡಲು ಅತ್ತಿತ್ತ ನೋಡೋಣ
 ಬುಡ ಬುಡ್ಕಿ ಬಾಬಾ

Monday, July 23, 2018

ಭರವಸೆ

ಸುತ್ತಲೂ ಕಾಡಿತ್ತು
ಎಲ್ಲಡೆ ಉದ್ದುದ್ದ ನೆರಳು ಚಾಚಿತ್ತು
ಆ ದಿನದ ಆಟ ಮುಗಿದಿತ್ತು
ಸೂರ್ಯ ಮುಳುಗಿ ಬಾನು ಕೆಂಪಾಗಿತ್ತು
ಆ ಕೆಂಪು ಏನೋ ಮುನ್ಸೂಚನೆ ಕೊಟ್ಟಂತಿತ್ತು
ಬೆಳಕಿನ ಕೊನೆ ಕಿರಣ ಕೊನೆಯುಸಿರೆಳೇದಿತ್ತು
ಎತ್ತ ನೋಡಿದರೂ ಕತ್ತಲು ಕವಿದಿತ್ತು
ಆ ಕವಿದ ಕತ್ತಲೆಗೆ ಎದೆ ಒಡೆದಂತಾಗಿತ್ತು
ಕೇಳಿರದ ಶಬ್ದಗಳೇ ಕಿವಿಯೆಲ್ಲಾ ತುಂಬಿತ್ತು
ಮುಂದೇನು ಎಂಬ ಪ್ರಶ್ನೆ ಅರ್ಥಹೀನವಾಗಿತ್ತು
ದೇಹ ನಿಂತಲ್ಲೇ ಕಲ್ಲಿನ ಪ್ರತಿಮೆಯಂತಾಗಿತ್ತು
ಕಳೆದ ಘಳಿಗೆಗಳ ಲೆಕ್ಕ ತಪ್ಪಿತ್ತು
ಇನ್ನೇನು ಮುಗಿಯೆತೆಲ್ಲಾ ಎಂದು ಅನಿಸಿತ್ತು
ಕೊನೆ ಘಳಿಗೆ ಬಂತೆಂದು ಮನ ಮಾಧವನ ನೆನೆದಿತ್ತು
ದೂರ ಬೆಟ್ಟದ ತುದಿಯಲಿ ದೀಪವೊಂದು ಹತ್ತಿ  ಹೊಯ್ದಾಡಿತ್ತು
 ಬುಡ ಬುಡ್ಕಿ ಬಾಬಾ

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...